ಬೇಸಿಗೆ ಬಂದರೆ ಕಾಡಿನ ಪ್ರಾಣಿ-ಪಕ್ಷಿಗಳಿಗೆ ನೀರಿನ ಹಾಹಾಕಾರ ತೀವ್ರವಾಗುತ್ತದೆ. ಇದನ್ನು ಅರಿತು ಅರಣ್ಯ ಇಲಾಖೆ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತರಿ ಮೂಲಕ ನೀರಿನ ದಾಹ ನೀಗಿಸಲು ಮುಂದಾಗಿದೆ. ಈ ಕುರಿತು ಒಂದು ವರದಿ..
ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಅರಣ್ಯ ಪ್ರದೇಶದಲ್ಲಿ ಕಾಡಿನ ನಡುವೆ ಹೊಂಡಗಳನ್ನು ನಿರ್ಮಿಸಿ ನೀರು ತುಂಬಿಸುವ ಮೂಲಕ ಅರಣ್ಯ ಸಿಬ್ಬಂದಿ ಕಾಡು ಪ್ರಾಣಿಗಳ ದಾಹ ನೀಗಿಸುವ ಕಾರ್ಯಕ್ಕೆ ಮುಂದಾಗಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಗದಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆ ಮತ್ತು ತಾಲ್ಲೂಕುಗಳ 66 ಕಿಲೋಮೀಟರ್ ವ್ಯಾಪ್ತಿಯ ಸುಮಾರು 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿರುವ ಕಪ್ಪತ್ತಗುಡ್ಡ ಅರಣ್ಯ ಪ್ರದೇಶ ಜೀವ ವೈವಿಧ್ಯತೆಯ ತಾಣವಾಗಿದ್ದು, ಉತ್ತರ ಕರ್ನಾಟಕದ ಸಹ್ಯಾದ್ರಿ ಪರ್ವತ ಎಂದೇ ಹೆಸರು ಪಡೆದಿದೆ.
ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಚಿರತೆ, ನರಿ, ತೋಳ, ಕಾಡುಬೆಕ್ಕು ಸೇರಿದಂತೆ ಹತ್ತಾರು ಪ್ರಬೇಧದ, ನೂರಾರು ವಿಧದ ಪ್ರಾಣಿ-ಪಕ್ಷಿಗಳ ವಾಸ ಸ್ಥಾನವಾಗಿದೆ.
ಬೇಸಿಗೆಯಲ್ಲಿ ತೊರೆ, ಕೆರೆಗಳು ಬತ್ತಿ ಹೋಗಿ ಪ್ರಾಣಿ-ಪಕ್ಷಿಗಳು ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಅರಣ್ಯ ಇಲಾಖೆ ಕಪ್ಪತ್ತಗುಡ್ಡದ ವಿವಿಧೆಡೆ ಸುಮಾರು 25ಕ್ಕೂ ಹೆಚ್ಚು ಹೊಂಡಗಳನ್ನು ನಿರ್ಮಿಸಿ, ಮೂಕ ಜೀವಿಗಳಿಗೆ ನೀರುಣಿಸುವ ಕೆಲಸ ಮಾಡುತ್ತಿದೆ.
ಇದು ಪ್ರಾಣಿಗಳ ನೀರಿನ ದಾಹ ನೀಗಿಸುವ ಜೊತೆಗೆ ಪ್ರಾಣಿಗಳು ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡುವುದನ್ನು ತಪ್ಪಿಸುತ್ತಿದೆ. ಜೊತೆಗೆ ಪ್ರಾಣಿಗಳು ಸಂತಾನೋತ್ಪತ್ತಿ ವೃದ್ದಿಯಾಗಲು ಪೂರಕ ವಾತಾವರಣ ಕಲ್ಪಿಸಿದೆ.
ದೂರದರ್ಶನದೊಂದಿಗೆ ನಿವೃತ್ತ ಪ್ರಾಂಶುಪಾಲ ಡಾ.ಎಸ್.ಎಫ್.ಶಿದ್ನೆಕೊಪ್ಪ, ಪ್ರಾಣಿಗಳಿಗೆ ನೀರುಣಿಸುವ ಕಾರ್ಯಕ್ಕೆ ಮುಂದಾಗಿರುವ ಅರಣ್ಯ ಇಲಾಖೆ ಕಾರ್ಯ ಪ್ರಶಂಸನೀಯ ಎಂದರು.
ಗದಗ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋಮನಗೌಡ ಪಾಟೀಲ, ನೀರಿನ ಹೊಂಡ ನಿರ್ಮಾಣದಿಂದ ಪ್ರಾಣಿಗಳು, ರೈತರ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುವುದು ತಪ್ಪಲಿದೆ. ಜೊತೆಗೆ ಪ್ರಾಣಿ ಸಂಕುಲ ವೃದ್ಧಿಯಾಗಲು ನೆರವಾಗಲಿದೆ ಎಂದು ತಿಳಿಸಿದರು.
ಮುಂಡರಿಗಿ ವಲಯ ಅರಣ್ಯ ಅಧಿಕಾರಿ ಮಂಜುನಾಥ ಮೇಗಿಲಮನಿ, ಮನ್ರೇಗಾ ಯೋಜನೆ ಅಡಿ ನೀರಿನ ಹೊಂಡ ನಿರ್ಮಿಸಿ ಪ್ರಾಣಿಗಳಿಗೆ ನೀರುಣಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಒಟ್ಟಾರೆಯಾಗಿ ಗದಗ ಜಿಲ್ಲೆಯ ಅರಣ್ಯ ಸಿಬ್ಬಂದಿ ಪ್ರಾಣಿ-ಪಕ್ಷಿಗಳಿಗಾಗಿ ನೀರುಣಿಸುವ ಕೆಲಸ ಮಾಡುತ್ತಿದ್ದು, ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
#LiveDDChandanaNews #DDChandanaNews #DDChandana #DDKannada