ಖನಿಜ ತೈಲಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ನಿಯಮಗಳನ್ನು ರೂಪಿಸಲು ಅಧಿಕಾರ ನೀಡುವ ತೈಲ ಕ್ಷೇತ್ರಗಳ ನಿಯಮಗಳು ಮತ್ತು ಅಭಿವೃದ್ಧಿ ತಿದ್ದುಪಡಿ ಮಸೂದೆ 2024 ಅನ್ನು ಲೋಕಸಭೆ ಇಂದು ಅಂಗೀಕರಿಸಿತು.
ಪೆಟ್ರೋಲಿಯಂ ಸಚಿವ ಹರ್‌ದೀಪ್ ಸಿಂಗ್ ಪುರಿ ಮಸೂದೆ ಮಂಡಿಸಿದರು.
ಈ ಕುರಿತು ಮಾಹಿತಿ ನೀಡಿ, ಮಸೂದೆಯು ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂನ ಪರಿಶೋಧನೆ ಮತ್ತು ಹೊರತೆಗೆಯುವಿಕೆಯನ್ನು ನಿಯಂತ್ರಿಸುತ್ತದೆ. ಜೊತೆಗೆ ಗುತ್ತಿಗೆಗಳ ಮಂಜೂರಾತಿಯ ನಿಯಂತ್ರಣ, ತೈಲ ಉತ್ಪಾದಿಸುವ ವಿಧಾನ, ರಾಯಧನ, ಶುಲ್ಕಗಳು ಮತ್ತು ತೆರಿಗೆಗಳನ್ನು ಸಂಗ್ರಹಿಸುವ ವಿಧಾನಗಳಿಗೆ ಸಂಬಂಧಿಸಿದಂತೆ ನಿಯಮ ರೂಪಿಸಲು ಕೇಂದ್ರಕ್ಕೆ ಅಧಿಕಾರ ನೀಡಲಿದೆ ಎಂಬ ಮಾಹಿತಿಯನ್ನು ಅವರು ನೀಡಿದರು.
ದೇಶದಲ್ಲಿ 80 ಕೋಟಿ ಜನರಿಗೆ ವ್ಯವಸ್ಥಿತ ರೀತಿಯಲ್ಲಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಯೋಜನೆ ರೂಪಿಸಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಅವರು, ಯುಪಿಎ ಸರ್ಕಾರ , 2013 ರಲ್ಲಿ ಆಹಾರ ಭದ್ರತಾ ಕಾನೂನನ್ನು ಜಾರಿಗೆ ತಂದರೂ ಜನರಿಗೆ ಪಡಿತರ ಸೌಲಭ್ಯ ಸಿಕ್ಕಿರಲಿಲ್ಲ. ಇದೀಗ ಕೇಂದ್ರ ಸರ್ಕಾರ ಬಡವರಿಗೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುವ ಗುರಿ ಹೊಂದಿದೆ ಎಂದರು.
2014ರ ಲೋಕಸಭಾ ಚುನಾವಣೆಯ ನಂತರ ಎನ್‌ಡಿಎ ಸರ್ಕಾರ ಅಧಿಕಾರ ವಹಿಸಿಕೊಂಡಾಗ, ಪ್ರಧಾನಿ ನರೇಂದ್ರ ಮೋದಿ , ಬಡವರ ನೋವನ್ನು ಅರ್ಥಮಾಡಿಕೊಳ್ಳುವ ಮೂಲಕ ಅವರಿಗೆ ಉಚಿತ ಆಹಾರ ಧಾನ್ಯಗಳನ್ನು ಖಚಿತಪಡಿಸಿಕೊಳ್ಳಲು ಯೋಜನೆ ರೂಪಿಸಿದರು. ಅಂತ್ಯೋದಯ ಅನ್ನ ಯೋಜನೆಯಡಿ ಪ್ರತಿ ಕುಟುಂಬಗಳಿಗೆ 35 ಕೆ.ಜಿ ಪಡಿತರವನ್ನು ವಿತರಿಸಲಾಗುತ್ತಿದೆ. ಇದರ ಅಡಿಯಲ್ಲಿ ಆರ್ಥಿಕವಾಗಿ ದುರ್ಬಲರ ಜೊತೆಗೆ ದಿವ್ಯಾಂಗರಿಗೂ ಈ ಯೋಜನೆಯ ಲಾಭ ನೀಡಲಾಗುತ್ತಿದೆ. ಅತಿ ಕಡಿಮೆ ಬೆಲೆಯಲ್ಲಿ ತಿಂಗಳಿಗೆ 35 ಕೆಜಿ ಆಹಾರ ಧಾನ್ಯ ನೀಡಲಾಗುತ್ತದೆ ಎಂದು ವಿವರಿಸಿದರು.
ಸುಮಾರು 34.6 ಲಕ್ಷ ಚೀಟಿಗಳು ನಕಲಿ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ. ಅರ್ಹರನ್ನು ಪಡಿತರ ಚೀಟಿಗೆ ಸೇರಿಸುವುದು ಹಾಗೂ ಅನರ್ಹರನ್ನು ಕೈಬಿಡುವಂತೆ ನಿರ್ದೇಶಿಸಲಾಗಿದೆ ಎಂದರು.
ಕೃಷಿಯಲ್ಲಿ ಸೌರ ಶಕ್ತಿಯನ್ನು ಉತ್ತೇಜಿಸುವ ಸಂಬಂಧ, ಪಿಎಂ ಕುಸುಮ್ ಯೋಜನೆ ಆರಂಭಿಸಲಾಗಿದೆ ಎಂದು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿ, ಈ ಯೋಜನೆಯ ಅಡಿ ಸೌರ ಪಂಪ್‌ಗಳು ಮತ್ತು ಗ್ರಿಡ್-ಸಂಪರ್ಕಿತ ನವೀಕರಿಸಬಹುದಾದ ಇಂಧನ ಆಧರಿತ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ರೈತರಿಗೆ ಮತ್ತು ಇತರ ಅರ್ಹ ಘಟಕಗಳಿಗೆ ಸಬ್ಸಿಡಿ ರೂಪದಲ್ಲಿ ಹಣಕಾಸಿನ ನೆರವು ನೀಡಲಾಗುತ್ತಿದೆ . 2014ರಲ್ಲಿ ಸೌರ ಶಕ್ತಿಯು 2.83 ಗಿಗಾವ್ಯಾಟ್ ಇದ್ದರೆ ಕಳೆದ ಹತ್ತು ವರ್ಷದಲ್ಲಿ ಇದು 100 ಗಿಗಾವ್ಯಾಟ್‌ಗೆ ಏರಿದೆ ಎಂದರು.
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕನ್ನಡದಲ್ಲಿಯೇ ಮಾತು ಆರಂಭಿಸಿ, ಮೈಸೂರಿನ ಹೊಳೆಕೇಸರಿ ಗ್ರಾಮದಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆ ಮಾಡಲಾಗಿದ್ದು, ಯಾವುದೇ ಕಾನೂನು ಪಾಲನೆ ಮಾಡಿಲ್ಲ. ಇದರಿಂದ ದುರ್ವಾಸನೆ ಬರುತ್ತಿದ್ದು, ಗ್ರಾಮಸ್ಥರು ತೊಂದರೆ ಅನುಭಿಸುವಂತಾಗಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕಿದೆ ಎಂದರು.
ಬಳಿಕ ಲೋಕಸಭೆಯ ಕಲಾಪವನ್ನು ಮಾರ್ಚ್ 17ಕ್ಕೆ ಮುಂದೂಡಲಾಯಿತು.
#LiveDDChandanaNews #DDChandanaNews #DDChandana #DDKannada